- ಪುಸ್ತಕದ ಹೆಸರು
: ಶಬ್ದಮಣಿದರ್ಪಣ
- ಲೇಖಕನ ಹೆಸರು
: ಕೇಶಿರಾಜ
- ಕಾಲ : ಹದಿಮೂರನೆಯ ಶತಮಾನ
- ವಸ್ತು
: ವ್ಯಾಕರಣ
- ಕಿರು ಪರಿಚಯ
: ಶಬ್ದಮಣಿದರ್ಪಣವು ಕನ್ನಡದ ಪ್ರಾಚೀನ ವ್ಯಾಕರಣ ಗ್ರಂಥಗಳಲ್ಲಿ
ಒಂದು. ಅದನ್ನು ಕೇಶಿರಾಜನು ಸುಮಾರು ಕ್ರಿ.ಶ. 1260 ರಲ್ಲಿ ಬರೆದನು. ಅವನು ಸಂಸ್ಕೃತದ ಕಾತಂತ್ರ ವ್ಯಾಕರಣದ
ಮಾದರಿಯನ್ನು ಅನಸರಿಸಿದನು. ಈ ಪುಸ್ತಕದಲ್ಲಿ ಪೀಠಿಕಾ ಪ್ರಕರಣ ಮತ್ತು ಕೊನೆಯಲ್ಲಿ ಬರುವ
‘ಪ್ರಯೋಗಸಾರ’ ಎಂಬ ಹೆಸರಿನ ಚಿಕ್ಕ
ಶಬ್ದಕೋಶವೂ ಸೇರಿದಂತೆ ಒಟ್ಟು ಹತ್ತು ಅಧ್ಯಾಯಗಳಿವೆ. ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು,
ಅಪಭ್ರಂಶ ಮತ್ತು ಅವ್ಯಯಗಳು ಉಳಿದ ಎಂಟು ಪ್ರಕರಣಗಳು. ಅವು ಕನ್ನಡದ ಧ್ವನಿವ್ಯವಸ್ಥೆ, ಸಂಧಿಗಳು, ಸಮಾಸಗಳನ್ನು
ರೂಪಿಸುವ ಬಗೆ, ನಾಮಪದಗಳು, ಕ್ರಿಯಾಪದಗಳು, ಪ್ರತ್ಯಯೀಕರಣ ಮುಂತಾದ ಹತ್ತು ಹಲವು ನುಡಿರಚನೆಗೆ ಸಂಬಂಧಿಸಿದ
ಸಂಗತಿಗಳನ್ನು ವಿವರಿಸುತ್ತದೆ ಹಾಗೂ ಚರ್ಚಿಸುತ್ತದೆ. ಆದರಲ್ಲಿ ಒಟ್ಟು 343 ಸೂತ್ರಗಳಿವೆ. ಶಬ್ದಮಣಿದರ್ಪಣವನ್ನು
ಕಂದಪದ್ಯಗಳಲ್ಲಿ ರಚಿಸಲಾಗಿದೆ. ಆದರೆ, ಪ್ರತಿ ಸೂತ್ರಕ್ಕೂ ಸ್ವತಃ ಕೇಶಿರಾಜನೇ, ವಿವರಣಾತ್ಮಕವಾದ ವ್ಯಾಖ್ಯಾನವನ್ನು
ಗದ್ಯದಲ್ಲಿ ಬರೆದಿದ್ದಾನೆ.(ವೃತ್ತಿ) ಅನಂತರದ ಶತಮಾನಗಳಲ್ಲಿ ನಿಟ್ಟೂರು ನಂಜಯ್ಯ ಮತ್ತು ಲಿಂಗಣಾರಾಧ್ಯರು
ತಾವು ಬರೆದ ಟೀಕುಗಳಲ್ಲಿ ಈ ಚರ್ಚೆಯನ್ನು ಮುಂದುವರಿಸಿದ್ದಾರೆ. ಎಚ್.ಎಸ್. ಬಿಳಿಗಿರಿಯವರು 1069 ರಲ್ಲಿ,
ಶಬ್ದಮಣಿದರ್ಪಣದ ಮೊದಲ ಎರಡು ಪ್ರಕರಣಗಳಿಗೆ ‘ಆಲೋಕ’
ಎಂಬ ಹೆಸರಿನ ವಿವರಣೆಯನ್ನು ಬರೆದಿದ್ದಾರೆ. ಇಲ್ಲಿ ಅವರು
ಆಧುನಿಕ ಭಾಷಾವಿಜ್ಞಾನದ ತಿಳಿವಳಿಕೆಯನ್ನು ಬಳಸಿಕೊಂಡಿದ್ದಾರೆ.
‘ಶಬ್ದಮಣಿದರ್ಪಣ‘ ಪ್ರಾಚೀನ ಕನ್ನಡ ವ್ಯಾಕರಣಗಳಲ್ಲಿ ಮುಖ್ಯವಾದುದು, ಉತ್ತಮವಾದುದು.
ಕೇಶಿರಾಜನ ಕಾಲದಲ್ಲಿ ಹಳಗನ್ನಡವು ನಡುಗನ್ನಡವಾಗಿ ಬದಲಾವಣೆ ಹೊಂದುತ್ತಿತ್ತು. ಅವನು ಆ ಬದಲಾವಣೆಗಳನ್ನು
ಎಚ್ಚರಿಕೆಯಿಂದ ಗಮನಿಸಿ, ಪ್ರಾಮಾಣಿಕವಾಗಿ ವಿವರಿಸುತ್ತಾನೆ. ಆದರೆ, ಅವನಿಗೆ ಆವು ಒಪ್ಪಿಗೆಯಿಲ್ಲವೆಂದು
ಕಟುವಾಗಿಯೇ ಹೇಳುತ್ತಾನೆ. ಸಂಸ್ಕೃತದ ವ್ಯಾಕರಣದ ಮಾದರಿಯನ್ನು ಬಳಸಿಕೊಂಡಿರುವುದು ಅವನಿಗೆ ಬಂಧನವಾಗಿಬಿಟ್ಟಿದೆ.
ಕನ್ನಡಕ್ಕೆ ಸಹಜವಾದ ಅನೇಕ ಲಕ್ಷಣಗಳನ್ನು ವಿವರಿಸಲು ತನ್ನ ಮಾದರಿಗೆ ಸಾದ್ಯವಿಲ್ಲವೆಂದು ಅವನಿಗೂ ಗೊತ್ತು.
ಆದರೂ ಅವನು ತನ್ನ ಪಟ್ಟು ಬಿಡುವುದಿಲ್ಲ. ಎಷ್ಟೋ ಸಲ ಅವನು ಕೊಡುವ ಸಮರ್ಥನೆಗಳು ಬಹಳ ದುರ್ಬಲವಾಗಿವೆ.
ನಿಜವಾದ ಸಂಗತಿಗಳು ಢಾಳಾಗಿ ಕಣ್ಣಿಗೆ ಕಟ್ಟುತ್ತವೆ. ಅವನು ಖಡಾಖಂಡಿತವಾಗಿ, ಸರಿಯಲ್ಲವೆಂದು ಹೇಳಿದ
ಅನೇಕ ಬದಲಾವಣೆಗಳು ನಡೆದೇ ನಡೆದವು. ಆದ್ದರಿಂದಲೇ ಅವನ ಕೃತಿಯು ಬದಲಾಗುತ್ತಿರುವ ಕನ್ನಡದ ಸ್ಥಿತಿಗತಿಗಳಿಗೆ
ನಿಜವಾಗಿಯೂ ಕನ್ನಡಿ ಹಿಡಿಯುತ್ತವೆ. ಅವನು ಸೂತ್ರಗಳಿಗೆ ಕೊಟ್ಟಿರುವ ಉದಾಹರಣೆಗಳನ್ನು (ಪ್ರಯೋಗ) ವಿವಿಧ
ಮೂಲಗಳಿಂದ ಆರಿಸಿಕೊಂಡಿದ್ದಾನೆ. ಅವುಗಳಲ್ಲಿ ಅನೇಕ ಪ್ರಯೋಗಗಳು ಈಗ ಸಿಕ್ಕಿರುವ ಹಾಗೂ ಸಿಕ್ಕದಿರುವ
ಸಾಹಿತ್ಯಕೃತಿಗಳಿಂದ ಆರಿಸಿಕೊಂಡವು. ಆದರೆ, ಅವನು ಸಾಮಾನ್ಯವಾಗಿ ಮೂಲಕೃತಿಗಳನ್ನು ಹೆಸರಿಸುವುದಿಲ್ಲ.
ಅವನ ಅಭಿರುಚಿ ಹಾಗೂ ಆಡುಮಾತು ಮತ್ತು ಸಾಹಿತ್ಯಕ ಭಾಷೆಗಳನ್ನು ಕುರಿತ ಅವನ ತಿಳಿವಳಿಕೆಯು ಅತ್ಯುತ್ತಮವಾದುದು.
ಹದಿಮೂರನೆ ಶತಮಾನದಷ್ಟು ಹಿಂದೆಯೇ, ಸಂಸ್ಕೃತ ವ್ಯಾಕರಣವು ಹಾಕಿರುವ ಕಣ್ಕಟ್ಟುಗಳಿಂದ ಬಿಡಿಸಿಕೊಂಡು
ಕನ್ನಡದ ನಿಜವಾದ ಸ್ವರೂಪವನ್ನು ಗಮನಿಸಿದ್ದು ಕೇಶಿರಾಜನ ದೊಡ್ಡ ಸಾಧನೆ. ಆದರೂ ಅವನು ಹೇಳುವ ಅನೇಕ
ನಿಯಮಗಳು ಆಧುನಿಕ ಸನ್ನಿವೇಶದಲ್ಲಿ ಅಸಮರ್ಪಕವೆಂದೋ ಅಪೂರ್ಣವೆಂದೋ ತೋರುತ್ತವೆ.
ಪ್ರಕಟಣೆಯ ಇತಿಹಾಸ
:
ಅ. ಶಬ್ದಮಣಿದರ್ಪಣಂ, 1868, ಸಂ. ಜೆ. ಗ್ಯಾರೆಟ್, ಮೈಸೂರು ಗೌರ್ನಮೆಂಟ್
ಪ್ರೆಸ್, ಬೆಂಗಳೂರು
ಆ. ಮಡಿವಾಳೇಶ್ವರ ಗಂಗಾಧರ ತೂರಮುರಿಯವರು, ಧಾರವಾಡದಿಂದ ಪ್ರಕಟವಾಗುತ್ತಿದ್ದ
‘ಮಠಪತ್ರಿಕೆ
‘
ಎಂಬ ನಿಯತಕಾಲಿಕದಲ್ಲಿ 1866 ರ ಜೂನ್ ತಿಂಗಳಿನಿಂದ ತಾವು ಬದುಕಿರುವವರೆಗೆ ಕಂತುಗಳಲ್ಲಿ
‘ಶಬ್ದಮಣಿದರ್ಪಣ’ದ ಸೂತ್ರ-ವಿವರಣೆಗಳನ್ನು
ಪ್ರಕಟಿಸಿದರು.
ಇ. ‘ಶಬ್ದಮಣಿದರ್ಪಣಂ‘, ಸಂ. ಫರ್ಡಿನಂಡ್ ಕಿಟ್ಟಲ್, 1872, 1899, 1920, (ಪಂಜೆ ಮಂಗೇಶರಾಯರಿಂದ
ಪರಿಷ್ಕೃತವಾದ ಆವೃತ್ತಿ.)
ಈ. ‘ಶಬ್ದಮಣಿದರ್ಪಣಂ’, ಸಂ. ???,
1920, ಕರ್ನಾಟಕ ಸಾಹಿತ್ಯ ಪರಿಷತ್ತು, ಬೆಂಗಳೂರು.
ಉ. ‘ಶಬ್ದಮಣಿದರ್ಪಣಂ’, (ಲಿಂಗಣಾರಾಧ್ಯನ ವೃತ್ತಿಯೊಂದಿಗೆ), ಸಂ. ಎ. ವೆಂಕಟರಾವ್ ಮತ್ತು
ಎಚ್. ಶೇಷಯ್ಯಂಗಾರ್, 1930, ಕನ್ನಡ ಗ್ರಂಥಮಾಲೆ, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸು.
ಊ. ‘ಶಬ್ದಮಣಿದರ್ಪಣಂ’, ಸಂ. ಡಿ.ಎಲ್. ನರಸಿಂಹಾಚಾರ್, 1958, ಶಾರದಾಮಂದಿರ, ಮೈಸೂರು.
ಋ. ‘ಶಬ್ದಮಣಿದರ್ಪಣಂ’, ಸಂ. ಡಿ.ಕೆ. ಭೀಮಸೇನರಾವ್, 1977, ಮೈಸೂರು ವಿಶ್ವವಿದ್ಯಾಲಯ,
ಮೈಸೂರು.
ಎ. ‘ಶಬ್ದಮಣಿದರ್ಪಣಂ’, ಸಂ. ಎಲ್. ಬಸವರಾಜು,
1986, ಚಿನ್ಮೂಲಾದ್ರಿ ಬೃಹನ್ಮಠ ಸಂಸ್ಥಾನ, ಚಿತ್ರದುರ್ಗ,
ಏ. ‘ಶಬ್ದಮಣಿದರ್ಪಣ’, ಸಂ. ಟಿ.ವಿ. ವೆಂಕಟಾಚಲ ಶಾಸ್ತ್ರೀ, 1994, ಕನ್ನಡ ಮತ್ತು ಸಂಸ್ಕೃತಿ
ನಿರ್ದೇಶನಾಲಯ, ಬೆಂಗಳೂರು.
ಮುಂದಿನ ಓದು
:
ಅ. ಶಬ್ದಮಣಿ ದರ್ಪಣದ ಬೇರೆ ಬೇರೆ ಆವೃತ್ತಿಗಳಿಗೆ ಸಂಪಾದಕರು
ಹಾಗೂ ಬೇರೆ ವಿದ್ವಾಂಸರು ಬರೆದಿರುವ ಮುನ್ನುಡಿಗಳು.
ಆ. ಈ ಆವೃತ್ತಿಗಳಲ್ಲಿ ಸೇರಿಸಿರುವ ನಿಟ್ಟೂರು ನಂಜಯ್ಯ ಮತ್ತು
ಲಿಂಗಣಾರಾಧ್ಯರ ಟೀಕುಗಳು.
ಇ.‘ಶಬ್ದಮಣಿದರ್ಪಣದ ಪಾಠಾಂತರಗಳು ಮತ್ತು ಅನುಭವಾಮೃತವೂ ಹರಿಕಥಾಮೃತಸಾರವೂ‘, ಡಿ.ಕೆ. ಭೀಮಸೇನರಾವ್,
1951
ಈ. ‘ಆಲೋಕ’, ಎಚ್.ಎಸ್. ಬಿಳಿಗಿರಿ, 1969, ಅಕ್ಷರ ಪ್ರಕಾಶನ, ಹೆಗ್ಗೋಡು.
ಉ. ‘ದರ್ಪಣದೀಪಿಕೆ’, ಜಿ. ಅಬ್ದುಲ್ ಬಶೀರ್, ಬೆಂಗಳೂರು
ಊ. ‘ನಿಜಕ್ಕೂ ಹಳೆಗನ್ನಡ ವ್ಯಾಕರಣ ಎಂತಹದು?’,
ಡಿ.ಎನ್. ಶಂಕರ ಭಟ್, 2005, ಭಾಷಾ ಪ್ರಕಾಶನ, ಮೈಸೂರು.
ಋ. ‘Keshiraja’s
Shabdamanidarpana- a linguistic analysis, by J.S. Kulli, 1976, Dharwada.
ಕೆಲವು ಹಸ್ತಪ್ರತಿಗಳು
ಅ. ಜೈನ ಮಠ, ಮೂಡಬಿದ್ರಿ, ಶಕವರ್ಷ 1473 ರ ಹಸ್ತಪ್ರತಿ
ಆ. ಶ್ರವಣ ಬೆಳಗೊಳದ ಹಸ್ತಪ್ರತಿ
ಇ. ಡಿ.ಕೆ. ಭೀಮಸೇನರಾಯರು ಉಪಯೋಗಿಸಿದ ಹಸ್ತಪ್ರತಿ
ಈ. ಎಲ್, ಬಸವರಾಜು ಅವರು ಉಪಯೋಗಿಸಿದ ಹಸ್ತಪ್ರತಿ